ರಾಷ್ಟ್ರಪತಿಗಳ ಕಾನ್ವಾಯನ್ನೇ ತಡೆದ ಕರ್ನಾಟಕದ ಟ್ರಾಫಿಕ್ ಪೊಲೀಸ್‌ಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ!!

ಈಗ ಪರಿಸ್ಥಿತಿ ಹೇಗಿದೆ ಎಂದರೆ ಪಂಚಾಯಿತಿ, ಆ ಸಂಘ, ಈ ಸಂಘದ ಸದಸ್ಯರನ್ನು ತಡೆದರೆ ಪೊಲೀಸರಿಗೆ ಆವಾಸ್ ಹಾಕುವವರಿದ್ದಾರೆ. ನಾನ್ ಯಾರು ಗೊತ್ತಾ? ಮೇಲಿನ ಅಧಿಕಾರಿಯಿಂದ ಫೋನ್ ಮಾಡಿಸ್ಲಾ ಎಂದು ದಬಾಯಿಸುವವರೂ ಇಲ್ಲದಿಲ್ಲ. ಆದರೆ ಈ ಪೊಲೀಸ್ ಏಕಾಏಕಿ ದೇಶದ ಪ್ರಥಮ ಪ್ರಜೆ ಕಾನ್ವಾಯನ್ನೇ ತಡೆದ ಎಂದರೆ…! ಇಂತವರಿಗೆ ಯಾಕೆ ಮೆಚ್ಚುಗೆ ಅಂತಿದ್ದೀರಾ… ಅವರು ತಡೆದದ್ದು ಯಾಕೆ ಅಂತ ಗೊತ್ತಾದರೆ ನೀವೂ ಅಷ್ಟೇ ಮೆಚ್ಚುಗೆ ವ್ಯಕ್ತಪಡಿಸುತ್ತೀರಾ…! ಇಷ್ಟಕ್ಕೂ ಏನಾಯಿತೆಂದರೆ…

ಒಬ್ಬರ ಪ್ರಾಣ ಕಾಪಾಡುವ ಸಲುವಾಗಿ ಅವರು ಈ ಕೆಲಸ ಮಾಡಬೇಕಾಯಿತು. ರಾಷ್ಟ್ರಪತಿಗಳ ಕಾನ್ವಾಯ್ ತಡೆದು…ಆಂಬುಲೆನ್ಸ್‌ಗೆ ಹೋಗಲು ದಾರಿ ಮಾಡಿಕೊಟ್ಟ ಈ ಟ್ರಾಫಿಕ್ ಪೊಲೀಸ್ ಅದೆಷ್ಟೋ ಜನರ ಮನಸನ್ನು ಸೂರೆಗೊಂಡಿದ್ದಾರೆ. ಅಂದು ಆಗಿದ್ದೇನೆಂದರೆ…ಕಳೆದ ಶನಿವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿಗೆ ಬಂದಿದ್ದು ಗೊತ್ತೇ ಇದೆ. ಬೆಂಗಳೂರಿನ ಟ್ರಿನಿಟಿ ಸರ್ಕಲ್ ಮೂಲಕ ರಾಷ್ಟ್ರಪತಿ ಕಾನ್ವಾಯ್ ರಾಜಭವನಕ್ಕೆ ಹೋಗುತ್ತಿದ್ದರೆ…ಆಂಬುಲೆನ್ಸ್ ಒಂದು ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿತ್ತು. ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಂ.ಎಲ್ ನಿಜಲಿಂಗಪ್ಪ ಆಂಬುಲೆನ್ಸನ್ನು ಗಮನಿಸಿದರು. ಆ ಆಂಬುಲೆನ್ಸ್ ಕೂಡಲೆ ಸಮೀಪದ ಆಸ್ಪತ್ರೆಗೆ ಹೋಗಬೇಕಾಗಿತ್ತು. ಸಮಯಪ್ರಜ್ಞೆ ಮೆರೆದ ನಿಜಲಿಂಗಪ್ಪ ಕೂಡಲೆ ರಾಷ್ಟ್ರಪತಿ ಕಾನ್ವಾಯ್ ತಡೆದು…ಆಂಬುಲೆನ್ಸ್ ಹೊರಡಲು ಅತ್ತ ಕಡೆಗಿನ ಟ್ರಾಫಿಕ್ ಕ್ಲಿಯರ್ ಮಾಡಿದರು. ಆ ಬಳಿಕ ಕಾನ್ವಾಯ್ ಕಳುಹಿಸಿದರು.

ಈ ವಿಷಯವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಡೆಪ್ಯುಟಿ ಕಮೀಷನರ್ ಅಭಯ್ ಗೋಯಲ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿಜಲಿಂಗಪ್ಪನವರನ್ನು ಪ್ರಶಂಸಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಟ್ವೀಟ್ ವೈರಲ್ ಆಗಿದೆ. ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಸಮಯಪ್ರೆಜ್ಞೆ ಮೆರೆದ ನಿಜಲಿಂಗಪ್ಪ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಮೇಲಿನ ಅಧಿಕಾರಿಗಳು ನಿಜಲಿಂಗಪ್ಪನವರಿಗೆ ರಿವಾರ್ಡನ್ನೂ ನೀಡಿ ಸತ್ಕರಿಸಿದ್ದಾರೆ.


Click Here To Download Kannada AP2TG App From PlayStore!