ಎದೆಹಾಲುಣಿಸಿ ಅನಾಥ ಕೂಸಿಗೆ ಪುನರ್ಜನ್ಮ ಪ್ರಸಾದಿಸಿದ ಬೆಂಗಳೂರಿನ ಮಹಿಳಾ ಕಾನಿಸ್ಟೇಬಲ್…! ಮಿಡಿದ ಮಾತೃ ಹೃದಯಕ್ಕೊಂದು ಸಲಾಮ್!

ನಮ್ಮ ದೇಶದಲ್ಲಿ ಇನ್ನೂ ಈ ರೀತಿಯ ಘಟನೆಗಳು ಆಗಾಗ ವರದಿಯಾಗುತ್ತಾ ತಲೆತಗ್ಗಿಸುವಂತೆ ಮಾಡುತ್ತಲೇ ಇವೆ. ಕದ್ದು ಮುಚ್ಚಿ ಬಸುರಾಗಿ, ಮಗುವಿಗೆ ಜನ್ಮ ನೀಡಿ, ಸಮಾಜಕ್ಕೆ ಹೆದರಿ ಆ ಮಗುವನ್ನು ಯಾವುದೋ ಕಸದ ತೊಟ್ಟಿಗೋ, ಅಥವಾ ಇನ್ನೇಲೋ ಬಿಸಾಕಿ ಹೋಗುವಂತಹ ಹೃದಯಗಳು ಇನ್ನೂ ಇವೆ. ಅಂತಹದ್ದೇ ಒಂದು ಮಗು ಒಂದು ದಿನದಿಂದ ರಸ್ತೆ ಬದಿ ಬಿದ್ದಿತ್ತು. ಅಷ್ಟೊಂದು ಕಠೋರ ಹೃದಯದ ತಾಯಿ ಅದೇಗೆ ಬಿಟ್ಟುಹೋದಳೋ.

ರಸ್ತೆ ಬದಿ ಇದ್ದ ಆ ಮಗುವನ್ನು ಇರುವೆಗಳು ಕಚ್ಚಿದ್ದವು. ಆದರೆ ಆ ಮಗುವನ್ನು 25 ವರ್ಷದ ಮಹಿಳಾ ಪೊಲೀಸ್ ಪೇದೆಯೊಬ್ಬರು ಜೀವ ಉಳಿಸಿದ್ದಾರೆ. ಖಾಕಿ ಎಂದರೆ ಸಾಮಾನ್ಯವಾಗಿ ಜನರಲ್ಲಿ ತಪ್ಪು ಅಭಿಪ್ರಾಯ ಇದೆ. ಆದರೆ ಖಾಕಿ ಹಿಂದೆಯೂ ಮಾನವೀಯ ಹೃದಯದ ಮಾತೃಮೂರ್ತಿ ಇದ್ದಾರೆ ಎಂಬುದನ್ನು ತೋರಿಸಿದ್ದಾರೆ ಯಲಹಂಕ ಪೊಲೀಸ್ ಠಾಣೆಯ ಸಂಗೀತಾ ಎಸ್ ಹಳಿಮನಿ.

ಯಲಹಂಕ ಬಳಿಯ ಜಿಕೆವಿಕೆ ಕ್ಯಾಂಪಸ್ ಬಳಿ ಕೊರೆಯುವ ಚಳಿಯಲ್ಲಿ ಆ ಕೂಸು ವಿಲವಿಲ ಎಂದು ಒದ್ದಾಡಿ ಹೋಗಿತ್ತು. ಹೆತ್ತ ತಾಯಿಗೇ ಬೇಕಿಲ್ಲದ ಮಗು ಇನ್ಯಾರಿಗೆ ಬೇಕು ಎಂದುಕೊಂಡಿತ್ತೇನೋ ಏನೋ. ಆದರೆ ದೇವರಂತೆ ಸಂಗೀತಾ ಆ ಮಗುವನ್ನು ಎತ್ತಿಕೊಂಡು ಅದಕ್ಕೆ ಹಾಲುಣಿಸಿ ಪುನರ್ಜನ್ಮ ನೀಡಿದ್ದಾರೆ.

ಸಿವಿಲ್ ಡಿಫೆನ್ಸ್ ವಾರ್ಡನ್‌ಗಳು ಆ ಮಗುವನ್ನು ಕೊರೆವ ಚಳಿಯಿಂದ ರಕ್ಷಿಸಿದ್ದರು. ಬಳಿಕ ಸಮೀಪದ ಸರಕಾರಿ ಆಸ್ಪತ್ರೆಗೆ ನೀಡಿದ್ದರು. ಆ ಮಗುವಿಗೆ ಫಾರ್ಮುಲಾ ಹಾಲುಣಿಸಲಾಗಿತ್ತು. ನಾಲ್ಕು ಫ್ಲ್ಯೂಯಿಡ್ಸ್ ನೀಡಲಾಗಿತ್ತು. ಆದರೂ ತಾಯಿ ಪ್ರೀತಿ ಸಿಕ್ಕಿರಲಿಲ್ಲ. ಯಾವಾಗ ಅಲ್ಲಿಗೆ ಸಂಗೀತಾ ಬಂದರೋ ಆಗಲೇ ಆ ಮಗುವಿಗೆ ತಾಯಿಯ ಆಸರೆ ಸಿಕ್ಕಿದ್ದು.

“ಆ ಮಗುವನ್ನು ನೋಡುತ್ತಿದ್ದರೆ ನನ್ನ ಮಗಳು ನೆನಪಾದಳು. ಆ ಮಗುವನ್ನು ನೋಡಿದಾಗ ಅದಕ್ಕೆ ಹಾಲುಣಿಸಬೇಕು ಅನ್ನಿಸಿತು. ಅದರ ಹಾರೈಕೆ ಮಾಡೋಣ ಎನ್ನಿಸಿತು. ಇರುವೆಗಳು ಕಚ್ಚಿದ್ದರೂ ಮಗು ಆರೋಗ್ಯವಾಗಿತ್ತು” ಎಂದಿದ್ದಾರೆ ಸಂಗೀತಾ.

ಹತ್ತು ತಿಂಗಳ ಮಗು ಇರುವ ಸಂಗೀತ ಈ ಮಗುವನ್ನು 10-15 ನಿಮಿಷಗಳ ಕಾಲ ಎತ್ತಿಕೊಂಡು ಆರೈಕೆ ಮಾಡಿದ್ದಾರೆ. ಅದಕ್ಕೆ ಹಾಲುಣಿಸಿದ್ದಾರೆ. ತಾಯಿ ಪ್ರೀತಿಯನ್ನು ಹಂಚಿದ್ದಾರೆ. “ಇಂತಹ ಮಗುವನ್ನು ಆ ತಂದೆತಾಯಿ ಹೇಗೆ ಬಿಟ್ಟುಹೋದರೋ. ಅದೂ ಈ ಕೊರೆವ ಚಳಿಯಲ್ಲೂ ಅದಕ್ಕೆ ಒಂದೇ ಒಂದು ಹೊದಿಕೆಯನ್ನೂ ಹಾಕದೆ ಹೊರಟು ಹೋಗಿದ್ದರು” ಎಂದಿದ್ದಾರೆ ಸಂಗೀತಾ.

2.7 ಕೆಜಿ ತೂಕ ಇರುವ ಮಗುವನ್ನು ಸದ್ಯಕ್ಕೆ ವಾಣಿ ವಿಲಾಸ ಆಸ್ಪತ್ರೆಗೆ ನೀಡಲಾಗಿದೆ. ಚಳಿಯಲ್ಲಿದ್ದ ಕಾರಣ ದೇಹದ ಉಷ್ಣಾಂತ ಕಡಿಮೆಯಾಗಿದೆ (ಹೈಪೋಥರ್ಮಿಯಾ). ಸೋಂಕುಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ಆ ಮಗುವಿಗೆ ಹಾಲುಣಿಸಿದ ಸಂಗೀತಾ ಪುನರ್ಜನ್ಮ ನೀಡಿದ್ದಾರೆ ಎಂದಿದ್ದಾರೆ ವೈದ್ಯರಾದ ಡಾ. ಆಸ್ಮಾ. ಅದೇನೇ ಇರಲಿ ಸಂಗೀತಾ ಅವರ ಮಾನವೀಯತೆಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಆ ಮಾತೃ ಹೃದಯಕ್ಕೆ ನೀವೂ ಒಮ್ಮೆ ಕೈಮುಗಿದು ಬಿಡಿ. ಆ ತಾಯಿ ಹೃದಯ ಇನ್ನಷ್ಟು ಸಂಭ್ರಮಿಸುತ್ತದೆ..!


Click Here To Download Kannada AP2TG App From PlayStore!

Share this post

scroll to top