ಅವಹೇಳನ, ಅಪಮಾನ ಮಾಡಿದವರಿಗೆ ಬುದ್ಧ ಹೇಳಿಕೊಟ್ಟ ಜೀವನಪಾಠ!

ಒಂದು ದಿನ ಬುದ್ಧ ಭಗವಾನನು ಭಿಕ್ಷಾಟನೆ ಮಾಡುತ್ತಾ ಮನೆಯೊಂದರ ಬಳಿ ನಿಲ್ಲುತ್ತಾನೆ. ಮೊದಲೇ ಕಸಿವಿಸಿಗೊಳ್ಳುತ್ತಾ ಮನೆಯಿಂದ ಹೊರಗೆ ಬಂದ ಮನೆಯೊಡತಿ ಎದುರಲ್ಲಿ ನಿಂತಿರುವ ಬುದ್ಧನನ್ನು ನೋಡಿ ಕೆಂಡಾಮಂಡಲವಾದಳು. ನೋಡೋದಕ್ಕೆ ಒಳ್ಳೆ ಗೂಳಿ ತರಹ ಇದ್ದೀಯಾ, ಏನಾದರೂ ಕೆಲಸ ಮಾಡಿಕೊಂಡು ಬದುಕುಬಹುದಲ್ಲಾ…ನೀನು ಸೋಮಾರಿಯಾಗುವುದಲ್ಲದೆ ನಿನ್ನ ಶಿಷ್ಯರು ಎಂದು ಹೇಳಿಕೊಳ್ಳುತ್ತಿರುವ ಇವರನ್ನೂ ಸೋಮಾರಿಗಳನ್ನಾಗಿ ಮಾಡುತ್ತಿದ್ದೀಯಾ ಎಂದು ಬಾಯಿಗೆ ಬಂದಂತೆ ಬೈಯುತ್ತಾಳೆ….

ಆದರೆ ಬುದ್ಧನು ಆಕೆಯ ಕೋಪತಾಪದ, ಅವಹೇಳನದ ಮಾತುಗಳನ್ನು ಕೇಳುತ್ತಾ ಕಿರುನಗೆ ಬೀರಿದನೇ ಹೊರತು ಮರು ಮಾತನಾಡಲಿಲ್ಲ. ಆದರೆ ಅವರ ಶಿಷ್ಯರು ಮಾತ್ರ ಕೋಪದಿಂದ ಬುಸುಗುಡುತ್ತಿದ್ದರು. ಆಗ ಅವರನ್ನು ನೋಡುತ್ತಾ ಬುದ್ಧ ಏನು ಹೇಳಿದ ಎಂದರೆ…

ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನದೊಂದಿಗೆ… ಮಾತಾ! ಸಣ್ಣ ಸಂದೇಹವೊಂದನ್ನು ನಿವಾರಿಸುತ್ತೀರಾ? ಎಂದು ಕೇಳಿದ. ಅದಕ್ಕೆ ಆಕೆ ಕೇಳಿಕೊಳ್ಳುವುದು ನಿನಗೆ ಅಭ್ಯಾಸವೇ ಅಲ್ಲವೇ, ನಿನ್ನ ಸಂದೇಹ ತೀರಿಸುತ್ತೇನೆ ಎಂದಳು. ಬುದ್ಧನು ತನ್ನ ಕೈಯಲ್ಲಿನ ಭಿಕ್ಷಾಪಾತ್ರೆಯನ್ನು ತೋರುತ್ತಾ… ತಾಯಿ! ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕರಿಸಿದರೆ ಯಾರಿಗೆ ಸೇರುತ್ತದೆ? ಎಂದು ಕೇಳಿದ. ಅದಕ್ಕೆ ಆಕೆ ನಾನು ತೆಗೆದುಕೊಳ್ಳದೆ ತಿರಸ್ಕರಿಸಿದೆನಾದ್ದರಿಂದ ಆ ವಸ್ತು ನಿನಗೇ ಸೇರುತ್ತದೆಂದು ಉತ್ತರ ಕೊಟ್ಟಳು.

ಆದರೆ…ತಾಯಿ! ನಾನು ನಿನ್ನ ಬೈಗುಳ ಸ್ವೀಕರಿಸುತ್ತಿಲ್ಲ ಎನ್ನುತ್ತಿದ್ದಂತೆ ಆಕೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದಳು. ಈ ಘಟನೆಯ ಮೂಲಕ ಬುದ್ಧನು ಅತಿದೊಡ್ಡ ಧರ್ಮಸೂಕ್ಷ್ಮವನ್ನು ಭೋಧಿಸಿದ. ನಮ್ಮನ್ನು ಅವಹೇಳನ ಮಾಡುವವರು, ಆಡಿಕೊಳ್ಳುವವರು ಸುತ್ತಲೂ ಬಹಳಷ್ಟು ಮಂದಿ ಇರುತ್ತಾರೆ. ಕೆಲವರು ಬಹಿರಂಗವಾಗಿ ಟೀಕಿಸಿದರೆ, ಇನ್ನೂ ಕೆಲವರು ಹಿಂದೆ ಮಾತನಾಡಿಕೊಳ್ಳುತ್ತಾರೆ. ಅವನ್ನು ನಾನು ಸ್ವೀಕರಿಸಲಿಲ್ಲ ಎಂದರೆ ಯಾವುದೇ ಅಡ್ಡಿ ಆತಂಕ ಇರಲ್ಲ. ಯಾವಾಗ ಅವನ್ನು ಸ್ವೀಕರಿಸುತ್ತೀವೋ ಆ ಕ್ಷಣ ನಿನ್ನ ಪತನಕ್ಕೆ ಬುನಾದಿ ಹಾಕಿಕೊಂಡಂತೆ. ಹತ್ತು ಮಂದಿ ನಿನ್ನನ್ನು ಟೀಕಿಸುತ್ತಿದ್ದಾರೆಂದರೆ ನಿನ್ನ ಅಭಿವೃದ್ಧಿ ಆರಂಭವಾಗಿದೆ ಎಂದರ್ಥ.

 

\