ಅತ್ಯಂತ ಚಿಕ್ಕ ವಯಸ್ಸಿನ ಐಪಿಎಸ್ ಅಧಿಕಾರಿ ಈಕೆ, 6ನೇ ತರಗತಿಯಿಂದಲೇ ಐಪಿಎಸ್ ಕನಸು ಕಂಡಿದ್ದರು

ಯಾರಿಗೆ ಆಗಲಿ ಒಂದು ಕನಸು ಇರುತ್ತದೆ. ಕೆಲವರು ಅದನ್ನು ಸಾಕಾರ ಮಾಡಿಕೊಂಡರೆ ಕೆಲವರು ಇನ್ನೂ ಕನಸು ಕಾಣುತ್ತಲೇ ಇರುತ್ತಾರೆ. ತಾನು ಕಂಡ ಕನಸನ್ನು ಅತ್ಯಂತ ಕಡಿಮೆ ವಯಸ್ಸಿಗೇ ಸಾಕಾರಗೊಳಿಸಿಕೊಂಡವರು ತುಂಬಾ ಅಪರೂಪ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಕೇರಳದ ಮೇರಿನ್ ಜೋಸೆಫ್ ಸಹ ಒಬ್ಬರು. 27ನೇ ವರ್ಷಕ್ಕೆ ಐಪಿಎಸ್‍ಗೆ ಆಯ್ಕೆಯಾಗಿ ಇದೀಗ ಕೇರಳ ಸಶಸ್ತ್ರ ಪಡೆಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಡಕ್ ಆಫೀಸರ್ ಎನ್ನಿಸಿಕೊಂಡಿರುವ ಅವರ ಬಗ್ಗೆ ಈಗ ತಿಳಿದುಕೊಳ್ಳೋಣ.

ಸದ್ಯಕ್ಕೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗರಿಕ ಸೇವೆಗಳಿಗೆ ಸೇರಬೇಕೆಂದು ಅವರು ಆರನೇ ತರಗತಿಯಲ್ಲಿದ್ದಾಗಲೇ ಕನಸು ಕಂಡಿದ್ದರು. ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅವರು ಆಗಲೇ ಆರಂಭಿಸಿದರು. ಕೇರಳ ಕ್ಯಾಡರ್‌ನ ಅತ್ಯಂತ ಕಿರಿಯ ವಯಸ್ಸಿನ ಐಪಿಎಸ್ ಅಧಿಕಾರಿಯಾಗಿ ಅವರು ಆಯ್ಕೆಯಾಗುವ ಮೂಲಕ ಅವರ ಕನಸು ಸಾಕಾರವಾಯಿತು.

ಕೇರಳದಲ್ಲೇ ಹುಟ್ಟಿ ಬೆಳೆದ ಮೇರಿನ್ ಜೋಸೆಫ್ ಅವರು 2015ರಲ್ಲಿ ವೈವಾಹಿಕ ಜೀವನಕ್ಕೆ ಅಡಿಯಿಟ್ಟರು. ಅವರ ಪತಿ ಸೈಕಿಯಾಟ್ರಿಸ್ಟ್. ದೆಹಲಿಯಲ್ಲಿ ಶಿಕ್ಷಣ ಪಡೆದಿರುವ ಮೇರಿನ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2012ರಲ್ಲಿ ಸಿವಿಲ್ ಸರ್ವಿಸಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಪಾಸಾದರು.

ಖಡಕ್ ಅಧಿಕಾರಿ ಎನ್ನಿಸಿಕೊಂಡಿದ್ದ ಇವರಿಗೆ 2016ರಲ್ಲಿ ಬ್ಯೂಟಿಫುಲ್ ಆಫೀಸರ್ ಆಫ್ ಇಂಡಿಯಾ ಎಂಬ ಗೌರವಕ್ಕೂ ಪಾತ್ರರಾದರು. ಈ ಮೂಲಕ ಅವರ ಜನಪ್ರಿಯತೆಯೂ ಹೆಚ್ಚಾಯಿತು. ಆದರೆ ತಮ್ಮ ಫೇಸ್‌ಬುಕ್‌ನಲ್ಲಿ ಈ ಪ್ರಶಸ್ತಿಯನ್ನು ಒಲ್ಲೆ ಎಂದು ನಿರಾಕರಿಸಿದರು ಮೇರಿನ್.

“ಭಾರತದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ನನಗಿಂತಲೂ ಅತ್ಯಂತ ಕಷ್ಟಪಡುವ, ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಅಧಿಕಾರಿಗಳು ಸಾಕಷ್ಟು ಮಂದಿ ಇದ್ದಾರೆ. ಜನರ ಮೆಚ್ಚುಗೆ ಪಡೆದ ಹಲವಾರು ಅಧಿಕಾರಿಗಳಿದ್ದಾರೆ ಅಂತಹವರಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಿ” ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಅವರು ಬರೆದುಕೊಂಡಿದ್ದರು.

ಖಡಕ್ ಅಧಿಕಾರಿ ಎನ್ನಿಸಿಕೊಂಡಿರುವ ಮೇರಿನ್ ಅವರ ಪ್ರಕಾರ ನಮ್ಮ ದೇಶದಲ್ಲಿ ಕೆಲಸ ಮಾಡುವ ಪದ್ಧತಿ ಬದಲಾಗಬೇಕು. ಆಗ ದೇಶ ಇನ್ನಷ್ಟು ಉದ್ದಾರವಾಗುತ್ತದೆ ಎನ್ನುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಐಪಿಎಸ್‌ನಂತಹ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಹುತೇಕ ಮಂದಿ ಐಎಎಸ್‌ನಂತಹ ಹುದ್ದೆಗಳ ಬಗ್ಗೆ ಕನಸು ಕಾಣುತ್ತಾರೆ. ಮಹಿಳೆಯರೂ ಬ್ಯಾಟಲಿಯನ್ ಒಂದನ್ನು ಮುನ್ನಡೆಸುವಷ್ಟು ಸಮರ್ಥರು ಎಂಬುದನ್ನು ಅವರು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಹಲವಾರು ಮಹಿಳೆಯರಿಗೆ ಮೇರಿನ್ ಸ್ಫೂರ್ತಿಯ ಸೆಲೆ.

 


Click Here To Download Kannada AP2TG App From PlayStore!