ವೃದ್ಧಾಪ್ಯ ಬರದಂತೆ ತಡೆಯಬಹುದಂತೆ…ತುಂಬು ನೂರು ವರ್ಷ ಬದುಕಬಹುದು.!

ಕೆಲವು ನೂರು ವರ್ಷಗಳಿಂದ ತಜ್ಞರು, ವೈದ್ಯರು ಜತೆಯಾಗಿ ಮಾಡುತ್ತಿರುವ ಪ್ರಯೋಗಗಳು, ಪ್ರಯತ್ನಗಳು ಕಡೆಗೂ ಫಲಿಸುತ್ತಿವೆ. ಮನುಷ್ಯನನ್ನು ಮೃತ್ಯುಂಜಯನನ್ನಾಗಿ ಬದಲಾಯಿಸುವ ನಿಟ್ಟಿನಲ್ಲಿ ನೂರಾರು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇತ್ತೀಚೆಗೆ ತುಂಬು ನೂರು ವರ್ಷ ಆಯಸ್ಸಿಗೆ ಕಾರಣವಾಗಿ ಭಾವಿಸುತ್ತಿರುವ ವಂಶವಾಹಿನಿಯನ್ನು ಜಪಾನ್ ತಜ್ಞರು ಗುರುತಿಸಿದ್ದಾರೆ. ಈ ವಂಶವಾಹಿನಿಯ ಮೂಲಕ ಕ್ಯಾನ್ಸರನ್ನು, ವೃದ್ಧಾಪ್ಯ ಬರದಂತೆ ತಡೆಯಬಹುದು ಎನ್ನುತ್ತಿದ್ದಾರೆ ವೈದ್ಯರು. ಕಿಯೋ ಯೂನಿವರ್ಸಿಟಿ, ಟೋಕ್ಯೋ ಮೆಟ್ರೋಪಾಲಿಟನ್ ಇನ್‍ಸ್ಟಿಟ್ಯೂಟ್ ಆಫ್ ಜೆರಂಟಾಲಜಿಯ ಸಂಶೋಧಕರು ಜಂಟಿಯಾಗಿ ಕಂಡುಹಿಡಿದ ಈ ಮಹಾ ಮೃತ್ಯುಂಜಯ ವಂಶವಾಹಿ ಹೆಸರು “ಸಿಎಲ್‍ಇಸಿ3ಬಿ”.

ಸರಿಸುಮಾರು 5 ಸಾವಿರ ಮಂದಿ ವೃದ್ಧರ ಮೇಲೆ ನಾನಾ ರೀತಿಯ ಪರೀಕ್ಷೆಗಳನ್ನು ಮಾಡಿದ ಬಳಿಕ ಇಷ್ಟು ಸ್ಪಷ್ಟವಾಗಿ ಹೇಳುತ್ತಿದ್ದೇವೆ ಎಂದಿದ್ದಾರೆ ಸಂಶೋಧಕರು. 95 ವರ್ಷ ಮೇಲ್ಮಟ್ಟ ವೃದ್ಧರು 530 ಮಂದಿ, 80 ವರ್ಷದ ಒಳಗಿನ 4,312 ಮಂದಿಯಿಂದ ಸಂಗ್ರಹಿಸಿದ ರಕ್ತದ ಮಾದರಿಗಳನ್ನು, ಅವರ ಡಿಎನ್ಎಗಳನ್ನು ವಿಶ್ಲೇಷಿಸಿದರು. ನೂರು ವರ್ಷ ದಾಟಿದ ವೃದ್ಧರಲ್ಲಿ ಕ್ಯಾನ್ಸರ್ ನಿರೋಧಕ, ಮೂಳೆಗಳ ಪುಷ್ಟಿಕಾರಕ ಪ್ರೋಟೀನ್ ಟೆಟ್ರಾನೆಕ್ಟೀನ್ ಅಂಶ ಅಧಿಕವಾಗಿ ಇರುವುದಾಗಿ ಗೊತ್ತಾಯಿತು. ಸಿಎಲ್‌ಇಸಿಬಿ3 ಎಂಬ ವಂಶವಾಹಿನಿ ಕಾರಣವಾಗಿ ನಿರೋಧಕ ಪ್ರೋಟೀನ್ ಅಂಶ ಹೆಚ್ಚಾಗಿ ಇರುವುದಾಗಿ ಗೊತ್ತಾಯಿತು. ಇದೇ ಕ್ಯಾನ್ಸರ್‌ನ್ನು ತಡೆಯಲು ಸಹಕಾರಿಯಂತೆ.

ನೂರು ವರ್ಷದ ವೃದ್ಧರಲ್ಲಿ ಜೀವನ ಕಾಲ ಶೇ.30ರಷ್ಟು ಹೆಚ್ಚಲು ಸಹ ಈ ವಂಶವಾಹಿನಿಯೇ ಸಹಕಾರಿಯಂತೆ. ಆದರೆ, ತಾವು ಕಂಡುಹಿಡಿದ ಈ ಒಂದು ವಂಶವಾಹಿ ದೀರ್ಘಾಯುಷ್ಯಕ್ಕೆ ಕಾರಣವಲ್ಲದಿರಬಹುದು. ಆದರೆ ವೃದ್ಧಾಪ್ಯವನ್ನು ತಡೆಯುವಲ್ಲಿ ಮಾತ್ರ ಈ ವಂಶವಾಹಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಮಸಾಷಿ ತನಾಕ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನೆಗಳು ಈ ವಂಶವಾಹಿ ಬಗ್ಗೆ ನಡೆದು ಇನ್ನಷ್ಟು ಒಳ್ಳೆಯ ಫಲಿತಾಂಶಗಳನ್ನು ನೀಡಲಿವೆ..ಕ್ಯಾನ್ಸರ್‌ರನ್ನು ನಿರ್ನಾಮ ಮಾಡುವುದಷ್ಟೇ ಅಲ್ಲದೆ, ಮನುಷ್ಯನ ಆಯುಸ್ಸನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದಿದ್ದಾರೆ ಮಸಾಷಿ. ಈ ಪ್ರಯೋಗಗಳು ಫಲಿಸಿ ಕ್ಯಾನ್ಸರ್ ಇಲ್ಲದ ಸಮಾಜವನ್ನು ನೋಡೋಣ ಎಂದು ನಾವೂ ಆಶಿಸೋಣ.