7 ವರ್ಷದ ಈ ಪೋರಿ ಪಾರ್ಕ್ ಒತ್ತುವರಿ ಮಾಡದಂತೆ ಕೋರ್ಟ್‌ನಲ್ಲಿ ಕೇಸ್ ಹಾಕಿ ಗೆದ್ದಳು.!

ದೊಡ್ಡದೊಡ್ಡ ನಗರಗಳು, ಪಟ್ಟಣಗಳಲ್ಲಿ ಪಾರ್ಕ್‌ಗಳು ನಮಗೆ ಯಾವೆಲ್ಲಾ ರೀತಿ ಉಲ್ಲಾಸ, ಉತ್ಸಾಹವನ್ನು ನೀಡುತ್ತವೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಅವುಗಳಿಂದ ಶುದ್ಧವಾದ ಗಾಳಿ ನಮಗೆ ಲಭಿಸುತ್ತದೆ. ವ್ಯಾಯಾಮ ಮಾಡಿಕೊಳ್ಳಬಹುದು. ಮಕ್ಕಳು ಪಾರ್ಕ್‌ನಲ್ಲಿ ಆಟವಾಡಿಕೊಳ್ಳಬಹುದು. ದಣಿದವರು ಪಾರ್ಕ್‌ನಲ್ಲಿ ಆರಾಮವಾಗಿ ದಣಿವು ನಿವಾರಿಸಿಕೊಳ್ಳಬಹುದು. ಆದರೆ ಅಂತಹ ಪಾರ್ಕ್‌ಗಳು ಇಂದು ಕಣ್ಮರೆಯಾಗುತ್ತಿವೆ. ಯಾವುದೇ ನಗರದಲ್ಲಿ ನೋಡಿದರೂ ಒತ್ತುವರಿಯಾಗುತ್ತಿವೆ. ಸರಕಾರಿ ಅಧಿಕಾರಿಗಳೂ ಕೈಜೋಡಿಸಿರುವ ಕಾರಣ ಪಾರ್ಕ್‌ಗಳು ನಗರವಾಸಿಗಳಿಗೆ ಸಿಗುತ್ತಿಲ್ಲ. ದೆಹಲಿಯ ಒಂದು ಪಾರ್ಕ್‌ಗೆ ಸಹ ಇದೇ ರೀತಿಯ ಪರಿಸ್ಥಿತಿ ಉಂಟಾದ ಕಾರಣ ಅಲ್ಲೇ ಇರುವ ಏಳು ವರ್ಷದ ಬಾಲಕಿ ಕೋರ್ಟ್‌ನಲ್ಲಿ ಕೇಸ್ ಹಾಕಿದಳು. ಇದರಿಂದ ಅಧಿಕಾರಿಗಳು ಆ ಪಾರ್ಕನ್ನು ಕೆಡಹುವ ಕೆಲಸಕ್ಕೆ ಬ್ರೇಕ್ ಹಾಕಬೇಕಾಯಿತು.

ಅದು ದೆಹಲಿಯಲ್ಲಿನ ರೋಹಿಣಿ ಎಂಬ ಪ್ರದೇಶದಲ್ಲಿರುವ ಸೆಕ್ಟಾರ್ 8. ಅಲ್ಲೇ ಮನೆಯೊಂದರಲ್ಲಿ ವಾಸವಾಗಿದ್ದಾರೆ ನವ್ಯಾಸಿಂಗ್ ಎಂಬ 7 ವರ್ಷಗಳ ಪೋರಿ. ಆದರೆ ಅವರ ಕಾಲೋನಿಯಲ್ಲಿ 30 ವರ್ಷಗಳಿಂದ ಮಕ್ಕಳ ಪಾರ್ಕೊಂದಿದೆ. ಅದರಲ್ಲಿ ಸ್ಥಳೀಯರು ನಿತ್ಯ ವ್ಯಾಯಾಮ ಮಾಡುತ್ತಾರೆ. ಮಕ್ಕಳು ಆಟವಾಡುತ್ತಾರೆ. ನವ್ಯಾಸಿಂಗ್ ಸಹ ಅಲ್ಲಿಗೆ ಹೋಗುತ್ತಾಳೆ. ಈ ಹಿನ್ನೆಲೆಯಲಿ ದೆಹಲಿ ಡೆವಲಪ್‌ಮೆಂಟ್ ಅಥಾರಿಟಿ (ಡಿಡಿಎ) ಆ ಪಾರ್ಕನ್ನು ತೆಗೆದು ಅಲ್ಲಿ ಕಮ್ಯುನಿಟಿ ಸೆಂಟರ್, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಲು ಸಿದ್ಧವಾಯಿತು. ಇದೇ ಸಂಗತಿಯನ್ನು ಆ ಪಾರ್ಕ್ ಸಮೀಪದಲ್ಲಿ ಇರುವ ಕಾಲನಿ ವಾಸಿಗಳಿಗೆ ತಿಳಿಸಿತು. ತಂದೆ ಧೀರಜ್ ಕುಮಾರ್ ಮೂಲಕ ನವ್ಯಾಸಿಂಗ್‌ಗೂ ಆ ಸಂಗತಿ ತಿಳಿಯಿತು. ಹೇಗಾದರೂ ಮಾಡಿ ಆ ಪಾರ್ಕನ್ನು ಕಾಪಾಡಿಕೊಳ್ಳಬೇಕೆಂದು ಆ ಪೋರಿ ಕೇಳಿದಳು. ಮಗಳ ಕೋರಿಕೆ ಮೇರೆಗೆ ಧೀರಜ್ ದೆಹಲಿ ಹೈಕೋರ್ಟ್‌ನಲ್ಲಿ ಪಿಟಿಷನ್ ಹಾಕಿದರು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಡಿಡಿಎ‌ಗೆ ಆದೇಶಗಳನ್ನು ಜಾರಿ ಮಾಡಿತು. ಪಾರ್ಕ್ ಅಲ್ಲಿಂದ ತೆಗೆಯುವ ಆಲೋಚನೆಯನ್ನು ಕೈಬಿಡಬೇಕೆಂದು ಹೇಳಿತು. ಪಾರ್ಕ್ ತೆಗೆಯುವ ಕ್ರಮಕ್ಕೆ ಕೋರ್ಟ್ ಸ್ಟೇ ಆರ್ಡರ್ ನೀಡಿತು. ಇದರಿಂದ ಡಿಡಿಎ ಅಧಿಕಾರಿಗಳು ಹಿಂದೆ ಸರಿಯಬೇಕಾಯಿತು. ಆದರೆ ಕೋರ್ಟ್ ಡಿಡಿಎಗೆ ಇನ್ನಷ್ಟು ಆದೇಶಗಳನ್ನೂ ನೀಡಿತು. ಅಷ್ಟು ವರ್ಷಗಳಿಂದ ಇರುವ ಪಾರ್ಕ್ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೀರಿ, ಅದೇ ಪಾರ್ಕನ್ನು ತೆಗೆಯಬೇಕೆಂದಿದ್ದೀರಿ, ಎಷ್ಟೆಲ್ಲಾ ಜನರ ದುಡ್ಡು ವ್ಯರ್ಥವಾದಂತೆ ಆಗುತ್ತಿದೆ ಗಮನಿಸಿದ್ದೀರಾ..? ಪಾರ್ಕ್ ತೆಗೆದು ಅಲ್ಲಿ ಇನ್ನೇನನ್ನು ನಿರ್ಮಿಸುತ್ತೀರಿ? ಜನ ಎಷ್ಟು ಮಂದಿ ಬರುತ್ತಾರೆ..? ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟುತ್ತೀರಾ..? ಕಟ್ಟಿದರೆ ಪಾರ್ಕಿಂಗ್ ಹೇಗೆ? ಎಷ್ಟು ವೆಹಿಕಲ್ ಪಾರ್ಕ್ ಮಾಡಬಹುದು? ಈ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಪತ್ರವನ್ನು ಸೆಪ್ಟೆಂಬರ್ 18ರೊಳಗೆ ಕೋರ್ಟ್‌ಗೆ ನೀಡಬೇಕೆಂದು ಆದೇಶಿಸಿದೆ. ಇದೀಗ ಪಾರ್ಕ್ ಉಳಿಸಿದ ಆ ಪೋರಿ ಎಲ್ಲರ ದೃಷ್ಟಿಯಲ್ಲೂ ಪುಟಾಣಿ ಹೀರೋಯಿನ್.