ತೀರ್ಥಯಾತ್ರೆ ಎಂದರೇನು? ಯಾಕೆ ಮಾಡಬೇಕು..? ಯಾಕೆ ಮಾಡುತ್ತಾರೆ..?

ತೀರ್ಥಯಾತ್ರೆ ಯಾಕೆ ಮಾಡಬೇಕು..? ಎಂಬ ಪ್ರಶ್ನೆಗೆ ಪ್ರತಿಯೊಬ್ಬರಲ್ಲೂ ಅವರದೇ ಅದ ಉತ್ತರಗಳಿರುತ್ತವೆ. ಹಿಂದಿನ ಕಾಲದಲ್ಲಿ ಸಾಂಸಾರಿಕ ಸುಖ, ಸಂತೋಷವನ್ನು ತ್ಯಜಿಸಬೇಕು ಎಂದು ಕೊಳ್ಳುವವರು ತೀರ್ಥಯಾತ್ರೆ ಮಾಡುತ್ತಿದ್ದರು. ಇಲ್ಲವೇ ಕೊನೆಯ ಕಾಲದಲ್ಲಿ ತಮ್ಮ ಹರಕೆಯನ್ನು ತೀರಿಸಲು ತೀರ್ಥಯಾತ್ರೆ ಮಾಡುತ್ತಾರೆ. ಅಷ್ಟಕ್ಕೂ ತೀರ್ಥ ಸ್ಥಳಗಳು ಯಾಕೆ ಅಷ್ಟು ಪವಿತ್ರತೆ ಪಡೆದಿವೆ.? ನಮ್ಮೂರುಗಳಲ್ಲಿಯೇ ನಿತ್ಯ ಭಗವಂತನನ್ನು ಪೂಜಿಸುತ್ತಿರುವಾಗ ಬೇರೆ ತೀರ್ಥಯಾತ್ರೆ ಯಾಕೆ ಮಾಡಬೇಕು? ಇಂತಹ ಅನೇಕ ಸಂದೇಹಗಳು ನಮ್ಮಲ್ಲಿ ಬರಬಹುದು.. ಹಾಗಾದರೆ, ಏಕೆ ತೀರ್ಥಯಾತ್ರೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ… ತೀರ್ಥಯಾತ್ರೆ ಎಂಬುದು ಭಗವಂತನನ್ನು ದರ್ಶನ ಮಾಡಲು ಮಾನವ ಮೊದಲು ಆರಿಸಿಕೊಂಡ ಭಕ್ತಿ ಮಾರ್ಗ. ಭಕ್ತಿ ಮಾರ್ಗ ಎಂದರೆ ಮನಸಾ, ವಾಚಾ, ಕರ್ಮಣಾ, ತ್ರಿಕರಣ ಶುದ್ಧಿಯಾಗಿ ಭಗವಂತನ ಮೇಲೆ ನಂಬಿಕೆ ಇಟ್ಟು , ಬೇರೆ ಯಾವುದೇ ರೀತಿಯ ಇಂದ್ರಿಯ ಸುಖಗಳಿಗೆ ಮನಸ್ಸು ಕೊಡದೇ ಧ್ಯಾನ ಮಗ್ನರಾಗಿ ನಿಷ್ಠೆಯಿಂದ ದೇವರ ಸನ್ನಿಧಿಯನ್ನು ಸೇರುವುದು.

ಭಕ್ತಿಭಾವದಿಂದ ಪುಣ್ಯಕ್ಷೇತ್ರಗಳಿಗೆ ಕೈಗೊಳ್ಳುವ ಯಾತ್ರೆಯೇ ತೀರ್ಥಯಾತ್ರೆ. ಅಗಾಧ ಶಕ್ತಿಯುಳ್ಳ ಇಂಥ ಕ್ಷೇತ್ರಗಳಿಗೆ ಸುದೂರ ಪ್ರಯಾಣವನ್ನು ಕೈಗೊಳ್ಳುವುದರಿಂದ ಭಕ್ತರು ತಮ್ಮ ಜೀವನದಲ್ಲಿ ಆಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂಬುದಾಗಿ ನಂಬುತ್ತಾರೆ. ಇಂಥ ಯಾತ್ರೆಗಳು ಗೋಚರವಾಗುವ ಈ ನೆಲ, ನಿಸರ್ಗ, ಸಮಾಜವೆಂಬ ಸಾಮ್ರಾಜ್ಯದೊಡನೆ ಅಗೋಚರವಾದ ದೈವಿಕ ಶಕ್ತಿಯನ್ನು ಬೆಸೆಯವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇಂತಹ ಪುಣ್ಯಕ್ಷೇತ್ರಗಳನ್ನು ತೀರ್ಥಸ್ಥಾನಗಳೆಂದೂ ಭಾವಿಸಲಾಗಿದೆ. ಪ್ರಾಪಂಚಿಕ ವ್ಯಾಮೋಹ, ಅಹಂಕಾರ, ನಿರಾಸೆಗಳನ್ನು ತ್ಯಜಿಸಿ, ತಪಸ್ಸನ್ನುಗೈದು ಪರಿಶುದ್ಧರಾದ ಋಷಿ-ಮುನಿಗಳು ಇರುವ ತಾಣವನ್ನು ತೀರ್ಥ ಸ್ಥಾನವೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಹಿಂದುಗಳು ಅತ್ಯಂತ ಭಕ್ತಿಭಾವದಿಂದ ಗೌರವಿಸುವ ಅನೇಕ ತೀರ್ಥಕ್ಷೇತ್ರಗಳಲ್ಲಿ ಪವಿತ್ರ ನದಿಗಳು ಹರಿಯುತ್ತವೆ. ವಿಶೇಷವಾಗಿ ಗಂಗಾ ನದಿಯನ್ನು ಹಿಂದುಗಳೆಲ್ಲರೂ ಅತ್ಯಂತ ಭಕ್ತಿ ಗೌರವಗಳಿಂದ ಪೂಜಿಸುತ್ತಾರೆ.

ಒಬ್ಬ ಯಾತ್ರಿಕನು ಪುಣ್ಯಕ್ಷೇತ್ರಗಳನ್ನು, ಅಲ್ಲಿರುವ ಆರಾಧ್ಯ ದೈವವನ್ನು ಕಾಣಲೆಂದೇ ಇಂಥ ಯಾತ್ರೆಗಳನ್ನು ಕೈಗೊಳ್ಳುತ್ತಾನೆ. ಈ ಹಿನ್ನೆಲೆಯಲ್ಲಿಯೇ ಕಾಶಿ ದರ್ಶನ, ವಿಶ್ವನಾಥ ಸ್ವಾಮಿಯ ದರ್ಶನ, ಹಿಮಾಲಯ ದರ್ಶನ ಎಂದು ಇಂಥ ಯಾತ್ರೆಗಳನ್ನು ಹೆಸರಿಸಲಾಗಿದೆ. ಇಂಥ ಪ್ರವಾಸಗಳ ಕಾಲದಲ್ಲಿ ಎಷ್ಟೇ ಕಷ್ಟ ನಷ್ಟಗಳು ಎದುರಾದರೂ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯು ಆ ಯಾತ್ರಿಕನಲ್ಲಿ ಆವಿರ್ಭಸುತ್ತದೆ. ಇದಕ್ಕೆ ಕಾರಣವೆಂದರೆ ಆತನಲ್ಲಿರುವ ದೃಢವಾದ ವಿಶ್ವಾಸ. ಈ ತೀರ್ಥಯಾತ್ರೆಗಳು ಯಾತ್ರಿಕನ ಅಂತರಂಗ ಹಾಗೂ ಬಹಿರಂಗಗಳನ್ನು ಒಂದುಗೂಡಿಸುತ್ತವೆ.

ಇಂದಿನ ಆಧುನಿಕ ಯುಗದಲ್ಲಿ ತೀರ್ಥಯಾತ್ರೆ ಎಂದರೆ ಬಸ್ಸು, ರೈಲು ಅಥವಾ ವಿಮಾನ ಹೀಗೆ ಯಾವುದು ಸುಲಭ ಎನಿಸುತ್ತದೆಯೇ ಅದರಲ್ಲಿ ಹೋಗಿ ಎರಡು ದಿನ ಇದ್ದು, ದರ್ಶನ ಮಾಡಿಕೊಂಡು, ಸುತ್ತಮುತ್ತಲಿನ ಎಲ್ಲಾ ಸ್ಥಳಗಳನ್ನು ನೋಡಿಕೊಂಡು ಮತ್ತೆ ಸ್ವಸ್ಥಳಕ್ಕೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ಸಕ್ರಿಯರಾಗುತ್ತಾರೆ. ಆದರೆ ನಿಜವಾದ ತೀರ್ಥಯಾತ್ರೆಯ ಅರ್ಥ ಬೇರೆಯೇ ಆಗಿದೆ. ತೀರ್ಥ ಕ್ಷೇತ್ರಗಳು ಒಂದೊಂದು ಕ್ಷೇತ್ರ ಒಂದೊಂದು ವಿಶೇಷತೆ ಹೊಂದಿವೆ. ಈ ತೀರ್ಥ ಕ್ಷೇತ್ರಗಳಲ್ಲಿ ಕೆಲವು ಸ್ಥಳ ಪುರಾಣ ಹೊಂದಿವೆ. ಆ ಪ್ರದೇಶದಲ್ಲಿರುವ ಪ್ರಕೃತಿ ಎಷ್ಟೋ ಪವಿತ್ರತೆಯಿಂದ ಕೂಡಿವೆ. ಅಂತಹ ತೀರ್ಥ ಕ್ಷೇತ್ರದಲ್ಲಿರುವ ನೀರು, ಮರಗಳು ಮತ್ತೆ ಕಲ್ಲುಗಳು ಸಹ ಎಷ್ಟೋ ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳ ಬಳಕೆಯಿಂದ ಕೆಲವು ಕಾಯಿಲೆಗಳನ್ನು ಗುಣವಾಗಿ ಮನುಷ್ಯ ಆರೋಗ್ಯವಂತನಾಗುತ್ತಾನೆ‌. ಇಂಥ ತಾಣಗಳು ಯಾತ್ರಿಕರನ್ನು ಸೆಳೆಯುವುದು ಭಕ್ತಿಯ ಪರಾಕಾಷ್ಠೆ ಮಾತ್ರವಲ್ಲ, ಅವುಗಳ ನೈಸರ್ಗಿಕ ಚೆಲುವು, ಉಲ್ಲಾಸಕರ ವಾತಾವರಣ ಕೂಡ ಪ್ರವಾಸಿಗರನ್ನು ಆಕರ್ಷಿಸುವ ಸಂಗತಿಗಳಾಗಿವೆ.

ಇಂದ್ರಿಯಗಳ ಸುಖವನ್ನು ತ್ಯಜಿಸಿ ಭಗವಂತನ ಮೇಲೆ ಧ್ಯಾನ ಮಗ್ನರಾಗಿ, ಕೊನೆಯವರೆಗೂ ಆ ಪರಮಾತ್ಮನ ಸನ್ನಿಧಿಯಲ್ಲಿ ಕಳೆಯಬೇಕೆಂದುಕೊಳ್ಳುವವರು ತಮ್ಮ ಕೊನೆಯ ದಿನಗಳ ಜೀವನವನ್ನು ತೀರ್ಥಯಾತ್ರೆ ಸಂದರ್ಭದಲ್ಲಿ ಕಳೆಯುತ್ತಾರೆ. ಅಂತಹವರ ಜೀವನ ಒಂದು ಪದ್ದತಿಯಂತೆ ನಡೆಯಬೇಕು. ಇಂತಹ ಪದ್ದತಿಯನ್ನು ನಮ್ಮ ಮನೆಗಳಲ್ಲಿ ಆಚರಣೆ ಮಾಡುವುದು ಕಷ್ಟ. ಹಾಗಾಗಿ ಅವರು ಸಂಸಾರದ ಸುಖವನ್ನು ತ್ಯಜಿಸಿ, ಈ ತೀರ್ಥ ಸ್ಥಳಗಳ ಹೋಗುತ್ತಾರೆ.


Click Here To Download Kannada AP2TG App From PlayStore!

Share this post

scroll to top