ಛತ್ರಿ ಹಿಡಿದು… ರೈಲು ಓಡಿಸಬೇಕಾದ ಪರಿಸ್ಥಿತಿ.! ಭಾರತೀಯ ರೈಲ್ವೆ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಫೋಟೋ.!!

ಸದ್ಯಕ್ಕೆ ನಮ್ಮ ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಎಂತಹ ದಾರುಣ ಸ್ಥಿತಿ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರೈಲಿನಲ್ಲಿ ಪ್ರಯಾಣಿಕರಿಗೆ ನೀಡಬಹುದಾದ ಕನಿಷ್ಟ ಸೌಲಭ್ಯಗಳೂ ಇಲ್ಲವೆಂದು ಇತ್ತೀಚೆಗೆ ’ಕಾಗ್’ ತರಾಟೆಗೆ ತೆಗೆದುಕೊಂಡಿತ್ತು. ಪ್ರಯಾಣಿಕರಿಗೆ ಎಸಿ ಬೋಗಿಗಳಲ್ಲಿ ನೀಡುವ ಬ್ಲಾಂಕೆಟ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲವೆಂದು, ರೈಲಿನಲ್ಲಿ ನೀಡುವ ಆಹಾರದ ಗುಣಮಟ್ಟ ಸರಿಯಾಗಿ ಇಲ್ಲವೆಂದು ಕಾಗ್ ತಿಳಿಸಿದೆ. ಇದರಿಂದ ರೈಲ್ವೆ ಅಧಿಕಾರಿಗಳು ಇನ್ನು ಮುಂದೆ ಎಸಿ ಕೋಚ್‌ಗಳಲ್ಲಿ ಬ್ಲಾಂಕೆಟ್‌ಗಳನ್ನೇ ನೀಡಬಾರದೆಂದು ನಿರ್ಧರಿಸಿದ್ದಾರೆ. ಇನ್ನು ಇತ್ತೀಚೆಗೆ ರೈಲ್ವೆ ಪ್ರಯಾಣಿಕ ತಿನ್ನುತ್ತಿದ್ದ ವೆಜ್ ಬಿರ್ಯಾನಿಯಲ್ಲಿ ಹಲ್ಲಿಯೊಂದು ಬಂದಿತ್ತು. ಈ ರೀತಿಯ ಘಟನೆಗಳು ತುಂಬಾ ಕಡಿಮೆಯಾದರೂ ಹೊರಗೆ ಬರದೆ ಇರುವಂತಹವು ಅದೆಷ್ಟೋ ಇವೆ. ಕೆಲವು ತಡವಾಗಿ ಗೊತ್ತಾಗುತ್ತವೆ. ಆ ರೀತಿಯ ಘಟನೆಯಗಳಲ್ಲಿ ಒಂದು ನಾವೀಗ ಹೇಳಲಿರುವುದು.

ಸುಚೇತಾ ದಲಾಲ್ ಎಂಬ ಪತ್ರಕರ್ತೆ, ಕಾರ್ಯಕರ್ತೆ ಇತ್ತೀಚೆಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರೈಲು ಓಡಿಸುತ್ತಿರುವ ಒಬ್ಬ ಡ್ರೈವರ್ ಇದ್ದಾನೆ. ಮಳೆಯ ಕಾರಣ ಇಂಜಿನ್ ಮೇಲ್ಭಾಗದಿಂದ ನೀರು ಲೀಕ್ ಆಗುತ್ತಿದ್ದರೆ ಅದು ಮೇಲೆ ಬೀಳದಂತೆ ಛತ್ರಿ ಹಿಡಿದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಆತ ಆ ರೀತಿ ಕೆಲಸ ಮಾಡುತ್ತಿದ್ದಾಗ ಯಾರೋ ವಿಡಿಯೋ ತೆಗೆದಿದ್ದಾರೆ. ಆ ವಿಡಿಯೋವನ್ನು ಸುಚೇತಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ. ಹಾಗಾಗಿ ಆ ಪೋಸ್ಟ್ ವೈರಲ್ ಆಯಿತು.

ರೈಲ್ ಇಂಜಿನ್‌ಗೆ ರಕ್ಷಣೆ ಇಲ್ಲದಿರುವ ಬಗ್ಗೆ ಪ್ರಯಾಣಿಕರು ಈಗ ರೈಲ್ವೆ ಇಲಾಖೆ ಮೇಲೆ ಗರಂ ಆಗಿದ್ದಾರೆ. ಇಂಜಿ‌ನ್ ಈ ದುಸ್ಥಿತಿಯಲ್ಲಿದ್ದರೆ ಇನ್ನು ಬೋಗಿಗಳ ಪಾಡೇನು ಎನ್ನುತ್ತಿದ್ದಾರೆ. ಬುಲೆಟ್ ಟ್ರೈನ್ ಹಾಕುತ್ತೇವೆ ಎಂದು ಹೇಳುವ ಬದಲು ಇರುವ ರೈಲುಗಳಲ್ಲಿ ಸೌಲಭ್ಯಗಳನ್ನು ಜನರಿಗೆ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ಪ್ರಯಾಣಿಕರಿಗೆ ರಕ್ಷಣೆ ಇಲ್ಲ, ವರ್ಷಂಪ್ರತಿ ರೈಲು ಹಳಿಗಳ ಮೇಲೆ ಬಿದ್ದು, ರೈಲು ಅಪಘಾತಗಳಲ್ಲಿ ಸಾಕಷ್ಟು ಮಂದಿ ಸಾವಪ್ಪುತ್ತಿದ್ದಾರೆ. ಮೊದಲು ಅವುಗಳನ್ನು ನಿಯಂತ್ರಿಸುವ ಅಗತ್ಯವಿದೆ. ಇನ್ನು ಈ ವಿಡಿಯೋ ನೋಡಿದ ಮೇಲಾದರೂ ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಎಚ್ಚರ ಬರುತ್ತದೇನೋ ನೋಡಬೇಕು..!

Watch Video: